ಹುಣಸೂರು
	ಭಾರತದ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಉತ್ತರದಲ್ಲಿ ಕೃಷ್ಣರಾಜನಗರ, ಪೂರ್ವ ಮತ್ತು ದಕ್ಷಿಣಗಳಲ್ಲಿ ಮೈಸೂರು ಮತ್ತು ಹೆಗ್ಗಡದೇವನಕೋಟೆ ತಾಲ್ಲೂಕುಗಳೂ ನೈಋತ್ಯದಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕೂ ಪಶ್ಚಿಮದಲ್ಲಿ ಪಿರಿಯಾಪಟ್ಟಣ ತಾಲ್ಲೂಕೂ ಸುತ್ತುವರಿದಿವೆ. ಹನಗೋಡು, ಬಿಳಿಕೆರೆ, ಹುಣಸೂರು ಮತ್ತು ಗೌಡಗೆರೆ ಹೋಬಳಿಗಳು. ಒಂದು ಪಟ್ಟಣ ಮತ್ತು 209 ಗ್ರಾಮಗಳಿವೆ. ತಾಲ್ಲೂಕಿನ ವಿಸ್ತೀರ್ಣ 890.8 ಚ.ಕಿಮೀ. ಜನಸಂಖ್ಯೆ 2,58,138.

	ತಾಲ್ಲೂಕು ಪಶ್ಚಿಮಘಟ್ಟ ಶ್ರೇಣಿಯ ನೆರಳಲ್ಲಿದ್ದು ಮಲೆನಾಡ ಪ್ರದೇಶಕ್ಕೆ ಸೇರಿದೆ. ಈ ತಾಲ್ಲೂಕಿನ ಹನಗೋಡಿನಿಂದ ಕೊಡಗು ಜಿಲ್ಲೆಯ ಅಂಚಿನ ವರೆಗೂ ಚಾರ್ನೊಕೈಟ್ ಶಿಲಾಹರವಿದೆ. ಉಳಿದ ಭಾಗ ಕಣಶಿಲಾ ಪ್ರದೇಶವೆನ್ನಬಹುದು. ತಾಲ್ಲೂಕಿನ ಪಶ್ಚಿಮ ಮತ್ತು ದಕ್ಷಿಣದಲ್ಲಿ ಅರಣ್ಯಪ್ರದೇಶವಿದ್ದು ತೇಗ, ಗಂಧ, ಬೀಟೆ, ನಂದಿ, ಹೊನ್ನೆ, ಮತ್ತಿ, ಕರಿಮರ, ಬೆಂಕಿಕಡ್ಡಿ ತಯಾರಿಕೆಗೆ ಬೇಕಾದ ಮೃದುಮರ ಬೆಳೆಯುವುದಲ್ಲದೆ ಬಿದಿರು, ಅರಗು, ಮರಗೋಂದು ದೊರಕುವುವು. ಕೆಲವು ಬಗೆಯ ಹಣ್ಣಿನ ಮತ್ತು ಮಾವು, ಹುಣಿಸೆ, ತೆಂಗು ತೋಪುಗಳನ್ನೂ ಕಾಣಬಹುದು. ರಕ್ಷಿತ ಅರಣ್ಯ ಪ್ರದೇಶವಿದೆ. ವಿವಿಧ ಕಾಡುಪ್ರಾಣಿಗಳನ್ನೂ ಕಾಣಬಹುದಾದ ಕೆಲವು ಅರಣ್ಯ ಪ್ರದೇಶವಿದೆ. ಲಕ್ಷ್ಮಣತೀರ್ಥ ತಾಲ್ಲೂಕಿನ ಮುಖ್ಯ ನದಿ. ತಾಲ್ಲೂಕನ್ನು ನೈಋತ್ಯದಲ್ಲಿ ಪ್ರವೇಶಿಸಿ ಹನಗೂಡು, ಹುಣಸೂರು ಮತ್ತು ಕಟ್ಟೆಮಳಲವಾಡಿ ಮುಖಾಂತರ ಈಶಾನ್ಯಾಭಿಮುಖವಾಗಿ ಹರಿದು ಸಾಗರಕಟ್ಟೆ ಬಳಿ ಕಾವೇರಿಯನ್ನು ಸೇರುವುದು. ಬೇಸಗೆ ದಿನಗಳನ್ನು ಬಿಟ್ಟು ಉಳಿದ ಕಾಲದಲ್ಲಿ ಸಾಮಾನ್ಯವಾಗಿ ಹವೆ ತಂಪಾಗಿರುತ್ತದೆ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 770.78 ಮಿಮೀ.

	ತಾಲ್ಲೂಕಿನಲ್ಲಿ ಮರಳುಮಿಶ್ರಿತ ಕೆಂಪುಮಣ್ಣಿನ ಪ್ರದೇಶ ಹೆಚ್ಚು. ನೀರಾವರಿಯೂ ಈ ತಾಲ್ಲೂಕಿನಲ್ಲಿದ್ದು ಬತ್ತ, ರಾಗಿ, ಕಬ್ಬು, ದ್ವಿದಳಧಾನ್ಯಗಳನ್ನೂ ಹತ್ತಿ, ಹೊಗೆಸೊಪ್ಪನ್ನೂ ಬೆಳೆಯುತ್ತಾರೆ. ಮಾವು, ಅಡಕೆ, ತೆಂಗು, ಕೆಲವು ಬಗೆಯ ಫಲ ಮತ್ತು ತರಕಾರಿಗಳನ್ನು ತೋಟಗಳಲ್ಲಿ ಬೆಳೆಯುತ್ತಾರೆ. ಪಶುಪಾಲನೆಯಿದ್ದು ಪಶುವೈದ್ಯ ಶಾಲೆಗಳಿವೆ. ಮತ್ಸ್ಯೋದ್ಯಮ ಸಾಮಾನ್ಯವೆನ್ನಬಹುದು. ತಾಲ್ಲೂಕಿನಲ್ಲಿ ಅರಣ್ಯೋತ್ಪಾದಕ ವಸ್ತುಗಳ ತಯಾರಿಕೆಯ ಜೊತೆಗೆ ಮರ ಕೊಯ್ಯುವ, ಪ್ಲೈವುಡ್ ತಯಾರಿಕೆ, ತಂಬಾಕು ಮತ್ತು ಕಾಫಿಬೀಜ ಶುದ್ಧೀಕರಣ, ಚರ್ಮ ವಸ್ತುಗಳ ಉತ್ಪಾದನೆ, ಅಗರಬತ್ತಿ, ಸಿಮೆಂಟ್‍ಪೈಪ್ ಮತ್ತು ಕಿಟಕಿಗಳ ತಯಾರಿಕೆ ಮತ್ತು ಉಜ್ಜು ಕಂಬಳಿಗಳ ತಯಾರಿಕೆ ಉಂಟು. ಮರದ ಸಾಮಾನು ಮತ್ತು ಎತ್ತಿನ ಬಂಡಿಗಳನ್ನು ತಯಾರಿಸುವುದುಂಟು. ಜಿಲ್ಲಾ ಮತ್ತು ತಾಲ್ಲೂಕು ರಸ್ತೆಗಳಿದ್ದು ಸುತ್ತಲ ಪಟ್ಟಣ ಮತ್ತು ಗ್ರಾಮಗಳಿಗೆ ರಸ್ತೆ ಸಂಪರ್ಕವಿದೆ.	
						
	*
	ಹುಣಸೂರಿನ ಉತ್ತರಕ್ಕೆ 6 ಕಿಮೀ ದೂರದಲ್ಲಿರುವ ಕಟ್ಟೆಮಳಲವಾಡಿ ಗ್ರಾಮ ಲಕ್ಷ್ಮಣತೀರ್ಥ ನದಿಯ ಎಡದಂಡೆಯ ಮೇಲಿದೆ. ಈ ಗ್ರಾಮದಲ್ಲಿ ಒಂದು ಹಳೆಕೋಟೆಯ ಅವಶೇಷಗಳೂ ಪುರಾತನ ರಾಮೇಶ್ವರ ದೇವಾಲಯವೂ ಇದೆ. ಹುಣಸೂರಿಗೆ ಈಶಾನ್ಯದಲ್ಲಿ 18 ಕಿಮೀ ದೂರದಲ್ಲಿರುವ ಮಲ್ಲಿನಾಥಪುರ ಮೈಸೂರು-ಹುಣಸೂರು ರಾಜ್ಯ ಹೆದ್ದಾರಿಯಲ್ಲಿದೆ. ಈ ಗ್ರಾಮದಲ್ಲಿ ಪ್ರತಿ ಮೇ ತಿಂಗಳಲ್ಲಿ ನಡೆಯುವ ಮಾರಮ್ಮನ ಜಾತ್ರೆ ಹೆಸರಾದದ್ದು.

	ಹುಣಸೂರು ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಮೈಸೂರು-ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಮೈಸೂರಿನ ಪಶ್ಚಿಮಕ್ಕೆ 45 ಕಿಮೀ ದೂರದಲ್ಲಿ ಲಕ್ಷ್ಮಣತೀರ್ಥ ನದಿಯ ಎರಡೂ ದಂಡೆಗಳಲ್ಲಿ ಈ ಪಟ್ಟಣಹರಡಿದೆ. ಜನಸಂಖ್ಯೆ 43,893.

ಇಲ್ಲಿ ಅರಣ್ಯಗಳಿಗೆ ಸಂಬಂಧಪಟ್ಟ ಕೈಗಾರಿಕೆಗಳು ಹೇರಳವಾಗಿವೆ. ಪಟ್ಟಣಕ್ಕೆ ಹತ್ತಿರವಾಗಿ ರಾಜ್ಯ ಅರಣ್ಯ ಮೀಸಲು ಪ್ರದೇಶವಿದೆ. ಇಲ್ಲಿ ಮರ ಕೊಯ್ಯುವ ಕೈಗಾರಿಕೆ ಮುಖ್ಯವಾದದ್ದು. ಇಲ್ಲಿಗೆ ಸುತ್ತಲ ಗ್ರಾಮಗಳಿಂದ ಮತ್ತು ಕೊಡಗು ಜಿಲ್ಲೆಯಿಂದ ಮರದ ದಿಮ್ಮಿಗಳು ಬರುತ್ತವೆ. ಅರಣ್ಯ ಇಲಾಖೆ ಈ ದಿಮ್ಮಿಗಳನ್ನು ಹರಾಜು ಮೂಲಕ ಮಾರುವುದು. ಕಾಫಿಬೀಜದ ಶುದ್ಧೀಕರಣ ಇಲ್ಲಿನ ಒಂದು ಮುಖ್ಯ ಕೈಗಾರಿಕೆಯಾಗಿದೆ. ಹಿಂದೆ ಮೈಸೂರು ರಾಜ್ಯಕ್ಕೇ ಪ್ರಸಿದ್ಧವಾದ ಉಜ್ಜುಕಂಬಳಿಗಳನ್ನು ಇಲ್ಲಿ ತಯಾರಿಸಲಾಗುತ್ತಿತ್ತು. ಇತ್ತೀಚೆಗೆ ಕಡಿಮೆಯಾಗಿದ್ದರೂ ಕಲ್ಕುಣಿಕೆ ಎಂಬಲ್ಲಿಂದ ಬರುವ ಕಂಬಳಿಗಳಿಗೆ ಈಗಲೂ ಈ ಊರು ಪ್ರಸಿದ್ಧ. ಈ ಪಟ್ಟಣ ಚಪ್ಪಲಿಗಳಿಗೆ, ಮರದ ಆಟದ ಸಾಮಾನುಗಳಿಗೆ ಪ್ರಸಿದ್ಧಿಯಾಗಿತ್ತು. ಈಗಲೂ ಚರ್ಮ ವಸ್ತುಗಳ ತಯಾರಿಕೆಯುಂಟು. ಅಕ್ಕಿ ಮಾಡುವಿಕೆ, ತಂಬಾಕು ಶುದ್ಧೀಕರಣ, ಎಣ್ಣೆ ತಯಾರಿಕೆ, ಅಗರಬತ್ತಿ ತಯಾರಿಕೆ, ಸಿಮೆಂಟ್‍ನ ಪೈಪ್‍ಗಳು ಹಾಗೂ ಕಿಟಕಿಗಳ ತಯಾರಿಕೆಯುಂಟು. ಹುಣಸೂರು ಎತ್ತಿನ ಗಾಡಿಗಳು ಈ ಪ್ರದೇಶದ ಸುತ್ತಮುತ್ತ ಪ್ರಸಿದ್ಧಿ ಪಡೆದಿವೆ. ಪಟ್ಟಣ, ತಾಲ್ಲೂಕಿನ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕೆಗಳ ಕೇಂದ್ರ ಮತ್ತು ಮೈಸೂರು ಜಿಲ್ಲೆಯ ಮುಖ್ಯ ರಸ್ತೆ ಮಾರ್ಗಗಳ ಕೇಂದ್ರವಾಗಿದೆ. ಮಡಿಕೇರಿಗೆ ಹೋಗುವ ಎಲ್ಲ ರಸ್ತೆಗಳೂ ಇದರ ಮುಖಾಂತರವೇ ಹಾದುಹೋಗ ಬೇಕು. ಇಲ್ಲಿಂದ ದಕ್ಷಿಣದ ಕಡೆ ಹೆಗ್ಗಡದೇವನಕೋಟೆ, ಸರಗೂರು, ಉತ್ತರದ ಕಡೆ ಕಟ್ಟೆಮಳಲವಾಡಿಯ ಮುಖಾಂತರ ಕೃಷ್ಣರಾಜನಗರ, ಚುಂಚನಕಟ್ಟೆ ಕಡೆಗೆ ರಸ್ತೆಗಳಿವೆ. ಈ ಊರಿಗೆ ಸಮೀಪದಲ್ಲಿ ನಿವೃತ್ತ ಸೈನಿಕರ ವಸತಿ ಇದೆ. ಅದಕ್ಕೆ ಸ್ವಲ್ಪದೂರದಲ್ಲಿ ಹಿಂದೆ ಪ್ರಸಿದ್ಧವಾಗಿದ್ದು ಈಗ ಹಾಳುಬಿದ್ದಿರುವ ರತ್ನಪುರಿ ಕೋಟೆಯಲ್ಲಿ ಅನೇಕ ಭಗ್ನ ದೇವಾಲಯಗಳಿವೆ. ಇಲ್ಲಿ ಅಸಂಖ್ಯಾತ ಹುಣಿಸೇಮರಗಳಿದ್ದು ಹುಣಿಸೇಹಣ್ಣಿನ ಸಂಸ್ಕರಣ ಇಲ್ಲಿನ ಮುಖ್ಯ ಗೃಹಕೈಗಾರಿಕೆಯಾಗಿದೆ.		
(ಕೆ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ